ವಿಷಯಕ್ಕೆ ಹೋಗಿ

ಜಠರಾಗ್ನಿಯ ಜ್ವಾಲೆ ಭುಗಿಲೇಳಲಿ ಬಿಡಿ

ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರ ಆರ್ನಾಲ್ಡ್ ಟಾಯೆನ್ಬೀ ಅವರ ಎರಡು ಸುಂದರ ಅಣಿಮುತ್ತುಗಳು ಇಲ್ಲಿ ಪ್ರಸ್ತುತವೆನಿಸುತ್ತದೆ. ಅವರಿಂದು ನಮ್ಮೊಡನಿಲ್ಲ. ಅವರಿದನ್ನು ನುಡಿದು ದಶಕಗಳೇ ಸಂದಿವೆ. "ಅಮೆರಿಕ ದೇಶ ಕೋಣೆಯೊಳಗಿರುವ ಒಂದು ದೊಡ್ಡ ನಾಯಿಯಂತೆ. ಪ್ರತಿಬಾರಿ ಅದು ಬಾಲ ಅಲ್ಲಾಡಿಸಿದಾಗಲೂ ಅಲ್ಲಿರುವ ಒಂದಲ್ಲ ಒಂದು ವಸ್ತು ಕೆಳಗೆ ಬೀಳುತ್ತದೆ." "ಈಗಾಗಲೇ ನಿಚ್ಚಳವಾಗಿರುವಂತೆ, ಮನುಕುಲ ತನ್ನನ್ನು ತಾನು ನಾಶಗೊಳಿಸುವುದನ್ನು ತಪ್ಪಿಸಬೇಕಿದ್ದಲ್ಲಿ, ಪಾಶ್ಚಿಮಾತ್ಯ ದೇಶಗಳು ಮುನ್ನುಡಿ ಬರೆದ (ಆ) ಅಧ್ಯಾಯಕ್ಕೆ ಭರತ ವರ್ಷ ಅಂತ್ಯ ಹಾಡಬೇಕು....ಸನಾತನ ಧರ್ಮವಷ್ಟೇ ಅಪಾಯಕ್ಕೆ ಸಿಲುಕಿರುವ ಮನುಕುಲದ ಇತಿಹಾಸದ ದಿಕ್ಕನ್ನು ಬದಲಿಸಬಹುದು. ಇಡೀ ವಿಶ್ವವನ್ನು ಒಗ್ಗೂಡಿಸಬಲ್ಲ ಶಕ್ತಿ ಸಾಮರ್ಥ್ಯ ಅದಕ್ಕಿದೆ." ಸನಾತನ ಧರ್ಮದಿಂದ ಬಳುವಳಿಯಾಗಿ ಬಂದ ಸಂಪ್ರದಾಯದಂತೆ ನಡೆಯುವ ವಿವಾಹ ಮಹೋತ್ಸವದಲ್ಲಿ ಸಪ್ತಪದಿ ಬಹುಮುಖ್ಯ ಅಂಗ. ವಧೂ-ವರರಿಬ್ಬರೂ ಅಗ್ನಿದೇವರ ಸಮಕ್ಷಮದಲ್ಲಿ ವಿಧಿವತ್ತಾಗಿ ವಿವಾಹದೀಕ್ಷೆಯನ್ನು ಸ್ವೀಕರಿಸುವ ಸಂದರ್ಭವದು. ಪ್ರಮಾಣವಚನ ಸಂಸ್ಕೃತದಲ್ಲಿರುವುದರಿಂದ ಅದರ ಸಾರವನ್ನು ಬಿಂಬಿಸುವ "ಕಲ್ಲಿರಲಿ, ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ, ಹೊಸಬಾಳಿನ ಹಾದಿಯಲ್ಲಿ ಜತೆಗೂಡಿ ನಾ ಬರುವೆ" ಎಂಬ ಅಣ್ಣಾವ್ರ "ನ್ಯಾಯವೇ ದೇವರು" ಚಿತ್ರದ ಜನಪ್ರಿಯ ಗೀತೆಯ ಸಾಲುಗಳನ್ನು ಉದ್ಧರಿಸಬಹುದು. (ಬಂಡೀಪುರ ಕಾಡಿನಲ್ಲಿ, ಆ ಕಗ್ಗತ್ತಲಿನ ರಾತ್ರಿ ಬೃಹತ್ ಒಂಟಿ ಸಲಗ ಧುತ್ತನೆ ಎದುರಾದಾಗ ನಾನು ಕೈಬಿಟ್ಟು ಓಡಲು ಪ್ರಯತ್ನಪಟ್ಟೆನೆಂಬ ನಂಬಿಕೆಯನ್ನು ವರ್ಷಗಳ ನಂತರವೂ ನನ್ನಾಕೆ ಉಳಿಸಿಕೊಂಡಿದ್ದಾಳೆಂದು ಇತ್ತೀಚಿಗೆ ಬರೆದಿದ್ದೆ. ಆ ನಂಬಿಕೆ ಆರೋಪದ ರೀತಿಯಲ್ಲಿ ಒಮ್ಮೊಮ್ಮೆ ಹೊರಬರುವುದುಂಟು.) ಅಮೆರಿಕನ್ನರಿಗೆ ಸಪ್ತಪದಿಯ ಕಟ್ಟುಪಾಡುಗಳಿಲ್ಲ. ಆದರಲ್ಲಿ ಸೆವೆನ್ ಇಯರ್ ಇಚ್ ಎಂಬ ಪರಿಕಲ್ಪನೆಯುಂಟು. ಮದುವೆಯಾದ ಏಳನೇ ವರ್ಷದಲ್ಲಿ ವಿವಾಹದೀಕ್ಷೆಯ ಸಂಕೋಲೆಯನ್ನು ಸಡಿಲಗೊಳಿಸುವಂಥ ವಿದ್ಯಮಾನಗಳು ಘಟಿಸುತ್ತವೆ. ಎಲ್ಲರ ವಿಷಯದಲ್ಲಲ್ಲ. ದಂಪತಿಗಳು ವಿವಾಹೇತರ ಸಂಬಂಧ ಬೆಳೆಸಿಕೊಳ್ಳಲು ತುಡಿತರಾಗುತ್ತಾರೆ. ಆ ತುಡಿತ ಒಂದು ನಮೂನೆಯ ತುರಿತವೇ ಸರಿ. ಅದಕ್ಕೆ ಏಳನೇ ವರ್ಷದ ತುರಿತವೆಂದು ಹೆಸರು. ಪಿತ್ಥಕೋಶ ಕೆರಳಿದಾಗ ಮನೆ ಔಷಧಿಯಾಗಿ ನಮ್ಮ ಮನೆಗಳಲ್ಲಿ ಬಳಕೆಯಾಗುವುದು ದೊಡ್ಡಪತ್ರೆ. ಅದರ ಆರು ಎಲೆಗಳನ್ನು ಕತ್ತರಿಸಿ ಮೊಸರಿನಲ್ಲಿ ಹಾಕಿ ಲಘು ಒಗ್ಗರಣೆ ನೀಡಿ ಬಳಸಿದರೆ ಪಿತ್ಥ ಫೇರಿ ಕಿತ್ತಂತೆ. ಮೈಮೇಲೇಳುವ ಪಿತ್ಥ-ಜನಿತ ಗಂಧೆಗಳಿಗೂ ದೊಡ್ಪತ್ರೆ ಗಾಂಡೀವಿಯಿಂದ ಬಿಟ್ಟ ಬಾಣ. ಏಳನೇ ವರ್ಷದ ನವೆಗೂ ಇದಾಕೆ ಔಷಧಿಯಾಗಬಾರದು? ಅಮೆರಿಕನ್ನರಿಗೆ ಇದನ್ನು ಶಿಫಾರಸು ಮಾಡುವುದಕ್ಕೆ ಒಂದು ತೊಡಕಿದೆ. ನಮ್ಮಲ್ಲೇ ದೇಶೀ ಗೋ ತಳಿಗಳು ಅಪರೂಪವಾಗಿರುವಾಗ ಹಸುವಿನ ಮೊಸರು ಅವರೆಲ್ಲಿ ತಂದಾರು. ಜರ್ಸಿ ಹಸುಗಳಿಂದ ಲಭ್ಯವಾದ ಹಾಲಿನಿಂದ ಅವರೆಲ್ಲಿ ಮೊಸರು ಹೆಪ್ಪು ಹಾಕಿಯಾರು? ಈ ಥಂಡೀ ಹವೆಯಲ್ಲಿ ಹೆಪ್ಪು ಹಾಕುವುದಾದರೂ ಹೇಗೆ? ಅವರು ಗೋಧಿ ಬಳಸುವುದು ಹೆಚ್ಚು. ಹಾಗಾಗಿ ಚಪಾತಿಗೇ ಮೂರೆಲೆ ದೊಡ್ಪತ್ರೆ ಹಾಕಿ ತಿನ್ನಬಹುದು. ಏಳನೇ ವರ್ಷದ ನವೆಯನ್ನು ನೀಗಿಸಿಕೊಳ್ಳಬಹುದು. ನೀಗಿಸಿಕೊಳ್ಳಬೇಕೆಂಬ ಒಲವೇ ಇಲ್ಲದಿದ್ದರೆ ಏನು, ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಊಟೋಪಚಾರ ಕುರಿತಂತೆ ತಿಳಿದ ನಾಲ್ಕಕ್ಷರ ಬರೆಯಬಲ್ಲೆ, ಅಷ್ಟೆ. ಅಂತಹ ಪ್ರಶ್ನೆ ಏಳಬಹುದಾದ್ದರಿಂದ ಅವರನ್ನು ಅವರ ಪಾಡಿಗೆ ಬಿಡೋಣ. ನವೆ ಇರಲಿ, ಇರದಿರಲಿ, ದೊಡ್ಪತ್ರೆ ಚಪಾತಿಯನ್ನು ನೀವೆಲ್ಲರೂ ಮಾಡಿಕೊಂಡು ಧಾರಾಳವಾಗಿ ಸವಿಯಬಹುದು. ಮನೆಯ ಎಲ್ಲ ಸದಸ್ಯರಿಗೂ ಕೊಡಬಹುದು. ಔಷಧೀಯ ಗುಣ ಬಿಡಿ, ಇದು ಮೂಲತಃ ರುಚಿಯಾದ ತಿನಿಸು. ಮೆಂತ್ಯದ ಪರೋಟ ರುಚಿಸುವುದಾದಾರೆ, ದೊಡ್ಪತ್ರೆಯ ಚಪಾತಿಯೂ ರುಚಿಸುತ್ತದೆ. ಎಣ್ಣೆ ಕಡಿಮೆ ಇರಲಿ. ರಾಗಿಹಿಟ್ಟಿನ ಘಮಲಿಗೆ ಸಬ್ಬಸ್ಸಿಗೆ ಸೊಪ್ಪಿನ ಸೌಗಂಧ ಹೇಗೆ ಹೇಳಿಮಾಡಿಸಿದ್ದೋ, ಹಾಗೆ ಗೋಧಿಹಿಟ್ಟಿನ ಪರಿಮಳಕ್ಕೆ ದೊಡ್ಪತ್ರೆಯ ನೈಸರ್ಗಿಕ ಸುವಾಸನೆ ಸೇರಿಸಿದಾಗಲೂ ಜಠರಾಗ್ನಿಯ ಜ್ವಾಲೆ ಗಂಟಲಿನವರೆಗೂ ಭುಗಿಲೇಳುತ್ತದೆ, ಚಾಚಿದ ನಾಲಗೆಗೆ ಹಬ್ಬಿದರೂ ಆಶ್ಚರ್ಯವಿಲ್ಲ. ಏನು ನೋಡುತ್ತಿದ್ದೀರಿ? ಬಿಡಿಸಿ ದೊಡ್ಪತ್ರೆ. ಕಲಸಿ ಹಿಟ್ಟು.

ಕಾಮೆಂಟ್‌ಗಳು