ವಿಷಯಕ್ಕೆ ಹೋಗಿ

ಅಭಿನವ ಸಂಡಿಗೆ ಹುಳಿ

ಮೋಡಮುಸುಕಿದ ಮುಂಜಾನೆಯಂದು ನೀವೇ ಕರೆದದ್ದರಿಂದ ಮನೆಗೆ ಬಂದ ಅಪರೂಪದ ಅತಿಥಿಗೆ ಕೊಡುವ ಕಾಫಿ ಲೋಟದಲ್ಲಿ ಅರ್ಧದಷ್ಟು ತೊಗರೀಬೇಳೆಯನ್ನು ಕುಕ್ಕರ್ ಪಾತ್ರೆಯಲ್ಲಿ ಹಾಕಿ ಅದೇ ಲೋಟದ ಒಂದೂವರೆ ಪ್ರಮಾಣದಷ್ಟು ನೀರನ್ನು ಬೆರೆಸಿ. ಬೇಳೆ ಕಳೆಗುಂದಿದ್ದರೆ ರುಚಿ ಹೆಚ್ಚು. ಅಷ್ಟೇನೂ ಆರೈಕೆಯಿಲ್ಲದ ಮೃಗಾಲಯದ ಹುಲಿಯ ಹಳದಿ ಇದ್ದರೆ ಅತ್ಯುತ್ತಮ. ಒಂದು ಟೀ ಸ್ಪೂನ್ ಎಣ್ಣೆಯನ್ನು ಸೇರಿಸಿ ಬೇಯಿಸಿಕೊಳ್ಳಿ. ಕಡಲೇಕಾಯಿ ಬಳಸುವುದಿದ್ದರೆ ಒಂದು ಹಿಡಿ ಕಡಲೆಕಾಯಿಯನ್ನು ಒಂದು ಬಟ್ಟಲಿನಲ್ಲಿ ಜತೆಗೇ ಬೇಯಿಸಬಹುದು. ಗ್ಯಾಸ್ ಅಥವಾ ವಿದ್ಯುತ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಇಂತಹ ಪ್ರಯತ್ನಗಳು ಅನುಕರಣೀಯ. ಬೆಂದ ಬೇಳೆಯನ್ನು ಸೌಟಿನ ಹಿಂಬದಿಯಿಂದಲೇ ಮಟುಕುತ್ತಾ ಪೇಸ್ಟ್ ಹದಕ್ಕೆ ತಂದುಕೊಳ್ಳಿ. ಗಾರೆ ಕೆಲಸದ ಮಾದಪ್ಪ ಸಿಮೆಂಟಿನ "ಕೆನೆ" ತೆಗೆಯಲು ಕರಣೆಯ ಬೆನ್ನಿನಿಂದ ಸವರುವುದನ್ನು ನೋಡಿದ್ದೀರಿ ತಾನೇ? ಬಾಣಲೆಯಲ್ಲಿ ತುಪ್ಪದ ಒಗ್ಗರಣೆಯನ್ನು ಸಿದ್ಧಪಡಿಸಿ. ಒಂದು ಚಿಟಿಕೆ ಎಸೆಸ್ಪಿ ಇಂಗು, ಎಂಟು ತಾಜಾ ಕರಿಬೇವಿನ ಎಲೆಗಳನ್ನು, ಕಂಬಳೀ ಹುಳ ಎಲೆಯನ್ನು ಕತ್ತರಿಸುವಂತೆ, ಸಣ್ಣಗೆ ಕತ್ತರಿಸಿ ಹಾಕಿ. ಸಾಸಿವೆ, ಜೀರಿಗೆ ಬೇಕೆಂಬುದು ಗೊತ್ತೇ ಇದೆ. ಎರಡಿಂಚುದ್ದದ ಒಂದೋ, ಒಂದೂವರೆಯೋ ಶಿರಚ್ಛೇದಗೊಂಡ ಕೆಂಪು ಮೆಣಸಿನಕಾಯಿಯ ನಡು ಮುರಿದು ಹಾಕಿ. ನುಣ್ಣಗೆ ಅರೆದ ಹಸಿ ಶುಂಠಿ ಮತ್ತು ಬೆಳ್ಳುಳ್ಳಿಯ ಮಿಶ್ರಣ ಬೆರೆಸಿ. (ಹೃದಯವನ್ನು ಹದ್ದುಬಸ್ತಿನಲ್ಲಿಡಲು ಬೆಳ್ಳುಳ್ಳಿ ಒಳ್ಳೇದು ಅಂತ ಯದ್ವಾ-ತದ್ವಾ ಹಾಕಿ ರುಚಿ ಕೆಟ್ಟರೆ ನನ್ನನ್ನು ದೂರುವಂತಿಲ್ಲ.) ಪೀಟ್ಜ್ಯಾಗೆ ಕತ್ತರಿಸುವಂತೆ ಕತ್ತರಿಸಿದ ಒಂದು ಮಧ್ಯಮ ಗಾತ್ರದ ಹುಳಿ ಟೊಮೇಟೊ - ಐಚ್ಛಿಕ. ಒಂದೆರಡು ನಿಮಿಷದಲ್ಲಿ, ಬೆಂದ ಬೇಳೆಯನ್ನು ಹೊಸ ಹಡಗನ್ನು ಸಾಗರಕ್ಕಿಳಿಸುವಂತೆ ನಾಜೂಕಾಗಿ ಬಾಣಲೆಗಿಳಿಸಿ. ಸಾರು-ಹುಳಿ ಮಾಡಿ ಪಳಗಿದವರಿಗೆ ಮುಂದೇನು ಎಂದು ಹೇಳಿದರೆ, ಅವರ ಪಾಕಾನುಭವಕ್ಕೆ ಅಗೌರವ ತೋರಿದಂತೆ. ಅರಿಶಿನ, ಗರಂ ಮಸಾಲ, ದನಿಯಾ ಪುಡಿ, ಜೀರಿಗೆ ಪುಡಿ, ಮೆಣಸಿನಪುಡಿಯನ್ನು ಸಿಂಪಡಿಸಿ ಕುಡಿಸಿ. ಘಮ್ಮನೆ ವಾಸನೆ ಬರುವ ಹೊತ್ತಿಗೆ ಹಳದಿ-ಕೆಂಪು ಮಿಶ್ರಿತ ದಾಲ್ ಸಿದ್ಧ. ಕನ್ನಡದ ಧ್ವಜದ ದ್ವಿವರ್ಣದಂತಲ್ಲ. ಈಗ, ಬೇಯಿಸಿದ್ದಲ್ಲಿ, ಕಡಲೇಕಾಯಿಯನ್ನು ಸುರುವಿ. ಬೇಕಿದ್ದರೆ ಒಂದು ದುಂಡನೆಯ ಬೆಲ್ಲದುಂಡೆಯನ್ನು ಮುಖಕ್ಕೆ ಸಿಡಿಯದಂತೆ ಇಳಿಬಿಡಿ. ತುರಿದ ಅಚ್ಚುಬೆಲ್ಲವಾದರೂ ಅಡ್ಡಿಯಿಲ್ಲ. ಉಪ್ಪು, ಗೊತ್ತಲ್ಲ? ನಿಂಬೆ ಹಣ್ಣು ಧಾರಾಳವಾಗಿ ದೊರಕುತ್ತಿದೆ. ಮತ್ತಿನ್ನೇನು, ಹಿಂಡಿ ಹುಳಿ. ವಂದರಿಯಾಡಿದ ಒಂದು ಕಪ್ಪು ಗೋಧಿ ಹಿಟ್ಟಿಗೆ, ಸೂಕ್ತಪ್ರಮಾಣದಲ್ಲಿ ಉಪ್ಪು, ಪುಡಿಮಾಡಿದ ಓಮಮ್ ಕಾಳು, ಮೆಣಸಿನಪುಡಿ, ಅರಿಶಿನವನ್ನು ವಲ್ಲಭ ಭಾಯ್ ಪಟೇಲ್ ಚದುರಿಹೋಗಿದ್ದ ಪ್ರಾಂತ್ಯಗಳನ್ನು ಒಗ್ಗೂಡಿಸಿದಂತೆ ಬೆರೆಸಿ. ನಂತರ ಅಳ್ಳಕವಾಗದಂತೆ ನೀರಿನಲ್ಲಿ ಕಲಸಿ. ಬೆಂಗಳೂರಿನ ಹರೋಹರ ಜಾತ್ರೆಗೆ ಭಕ್ತಾದಿಗಳು ತೊಡುವ ಹಳದಿ ಬಣ್ಣ ಬರುವವರೆಗೂ ನಾದಿ. ತುಸುವೇ ಎಣ್ಣೆಯನ್ನು ತೋರಿಸಿ. ಒಬ್ಬಟ್ಟನ್ನು ಲಟ್ಟಿಸುವಂತೆ ಲಟ್ಟಿಸಿ, ಚಾಕುವಿನಿಂದ ಬೇಕಾದ ಆಕಾರದಲ್ಲಿ ಕತ್ತರಿಸಿ. ನನ್ನಾಕೆಯ ಹೆಸರು ಹೀರಲ್ ಹೀರಾ ಅಂದರೆ ವಜ್ರ. ಹಾಗಾಗಿ ನಾವು ಅದೇ ಆಕಾರದಲ್ಲಿ ಕತ್ತರಿಸುತ್ತೇವೆ. ಇದು ತಲೆಹರಟೆ ಅನ್ನಿಸಿದರೆ, ಶಂಕರಪೋಳಿಯ ಆಕಾರ. ಆಕಾರವೇನಾದರಂತೆ, ರುಚಿ ಅದೇ. ಚಪಾತಿಯ ಆಕಾರವನ್ನು ಕೆಡಿಸಬಲ್ಲವರಿಗೆ ಮರ್ಯಾದೆ ಕಾಪಾಡಿಕೊಳ್ಳಲು ಇದು ಸುವರ್ಣಾವಕಾಶ. ಕತ್ತರಿಸಿದ ತುಂಡುಗಳನ್ನು ಹುಳಿಯೊಳಗೆ ಬೆರೆಸಿ. ಸ್ವಲ್ಪಹೊತ್ತು ಬೇಯಲಿ. ಬೇಳೆಯ ಪ್ರೋಟೀನ್ಗೆ ಗೋಧಿಯ ಪ್ರೋಟೀನೂ ಸೇರಿರುವುದರಿಂದ ಒಪ್ಪತ್ತು ಉಂಡರೆ, ರಾತ್ರಿ ಹಸಿವಾಗದು. (ಇದು ನನ್ನ ಅನುಭವವಲ್ಲ!) ಹಾಗೇ ತಿಂದರೂ ನಡೆಯುತ್ತದೆ. ಅನ್ನಕ್ಕೆ ಬೆರೆಸಿ ತಿಂದರೂ ನಡೆಯುತ್ತದೆ. ಹೆಚ್ಚಿನ ರುಚಿ ಬಯಸುವವರು ಒಂದಷ್ಟು ಕೊಚ್ಚಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಆಲಂಕಾರಿಕವಾಗಿ ಧೋಕ್ಲಿಯ ಮೇಲಿಟ್ಟು ಕಬಳಿಸಬಹುದು. #ಸಹನೌಭುನಕ್ತು

ಕಾಮೆಂಟ್‌ಗಳು

  1. ಭಕ್ಷ್ಯಗಳ ರುಚಿಯೊಂದಿಗೆ ತಮ್ಮ ಬರವಣಿಗೆಯ ಸವಿಯನ್ನೂ ನಮಗೆ ಉಣಬಡಿಸುತ್ತಿರುವ ತಮಗೆ ಅನಂತ ವಂದನೆಗಳು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ